ನಿಕರಾಗ್ವ
ಮಧ್ಯ ಅಮೆರಿಕದ ಅತ್ಯಂತ ದೊಡ್ಡ ಗಣರಾಜ್ಯ.  ಉ.ಅ. 10-15 ಮತ್ತು ಪ.ರೇ. 83-87 ನಡುವೆ ಹಬ್ಬಿದೆ. ಉತ್ತರದಲ್ಲಿ ಹಾಂಡುರಸ್ ಗಣರಾಜ್ಯ, ಪೂರ್ವದಲ್ಲಿ ಕ್ಯಾರಿಬೀಯನ್ ಸಮುದ್ರ, ದಕ್ಷಿಣದಲ್ಲಿ ಕಾಸ್ಟರೀಕ ಗಣರಾಜ್ಯ ಮತ್ತು ಪಶ್ಚಿಮದಲ್ಲಿ ಪೆಸಿಫಿಕ್ ಸಾಗರ ಇವೆ. ನಿಕರಾಗ್ವದ ಗರಿಷ್ಠ ಅಗಲ 568 ಕಿಮೀ. ಇದಕ್ಕೆ ಕ್ಯಾರಿಬೀಯನ್ ಕಡೆಗೆ 538 ಕಿಮೀ. ಹಾಗೂ ಪೆಸಿಫಿಕ್ ಸಾಗರದ ಕಡೆಗೆ 350 ಕಿಮೀ.- ಒಟ್ಟು 888 ಕಿಮೀ. ಉದ್ದದ ಸಮುದ್ರತೀರವಿದೆ. ಇದರ ವಿಸ್ತೀರ್ಣ 1,30,000 ಚ.ಕಿಮೀ. ಜನಸಂಖ್ಯೆ 21,60,000 (1975 ಅಂ.) ರಾಜಧಾನಿ ಮನಾಗ್ವ.

       ಮೇಲ್ಮೈಲಕ್ಷಣ : ನಿಕಾರಾಗ್ವದಲ್ಲಿ ಮೂರು ಮುಖ್ಯ ಪ್ರಾಕೃತಿಕ ವಿಭಾಗಗಳಿವೆ. ಉತ್ತರದಲ್ಲಿ ಹಾಂಡುರಸ್ ದೇಶದ ಗಡಿಯೇ ತಲವಾಗಿರುವ ತ್ರಿಕೋಣಾಕೃತಿಯ ಪ್ರಸ್ಥಭೂಮಿ ಈ ದೇಶದ ಅತ್ಯಂತ ದೊಡ್ಡ ಪ್ರಾಕೃತಿಕ ವಿಭಾಗ. ಇದರ ದಕ್ಷಿಣದ ಮೊನೆ ಕಾಸ್ಟರೀಕದ ಅಂಚಿನ ಬಳಿ, ಸಾನ್ ವಾನ್ ನದಿಯ ಉತ್ತರಕ್ಕೆ ಕೆಲವೇ ಕಿಮೀ. ದೂರದಲ್ಲಿ ಇದೆ. ಇದು 1,524 ಮೀ.ಗಿಂತ ಹೆಚ್ಚು ಎತ್ತರವಾಗಿದೆ. ಇದರ ಅತ್ಯುನ್ನತ ಶಿಖರ ಜೆಲೈಯ (1,999 ಮೀ.). ಇದರ ಪಶ್ಚಿಮ ಭಾಗವನ್ನು ಜ್ವಾಲಾಮುಖಿ ಸ್ರಾವ ಮುಚ್ಚಿದೆ. ಕ್ಯಾರಿಬೀಯನ್ ತೀರ ಈ ದೇಶದ ಎರಡನೆಯ ಪ್ರಾಕೃತಿಕ ವಿಭಾಗ. ಇದು ತಗ್ಗಾದ ಬಯಲು; ಉಷ್ಣವಲಯದ ಅರಣ್ಯ ಪ್ರದೇಶ. ಮಧ್ಯ ಅಮೆರಿಕದ ಉಳಿದ ದೇಶಗಳ ಕರಾವಳಿಗಿಂತ ಇದು ಹೆಚ್ಚು ಅಗಲವಾಗಿದೆ. ಮೂರನೆಯ ವಿಭಾಗ ಚಿಕ್ಕದಾದರೂ ಜನವಸತಿಯ ದೃಷ್ಟಿಯಿಂದ ಅತ್ಯಂತ ಮಹತ್ತ್ವದ್ದು. ವಾಯವ್ಯದ ಫಾನ್ಸೇಕ ಖಾರಿಯಿಂದ ಕರ್ಣರೇಖೆಯಂತೆ ಆಗ್ನೇಯದತ್ತ ಕ್ಯಾರಿಬೀಯನ್ ಬದಿಗೆ ಕಾಸ್ಟರೀಕದ ಅಂಚಿನವರೆಗೆ ಹಬ್ಬಿರುವ ತಗ್ಗು ನೆಲವಿದು. ಮನಾಗ್ವ ಮತ್ತು ನಿಕರಾಗ್ವ ಎಂಬ ಎರಡು ವಿಶಾಲ ಸರೋವರಗಳು ಮತ್ತು ಸಾನ್‍ವಾನ್ ನದೀ ಕಣಿವೆ ಈ ವಿಭಾಗದಲ್ಲಿವೆ. ನಿಕರಾಗ್ವ ಸರೋವರ 160 ಕಿಮೀ. ಉದ್ದ ಮತ್ತು 72 ಕಿಮೀ. ಅಗಲವಾಗಿದೆ. ಮನಾಗ್ವ ಸರೋವರ 61 ಕಿಮೀ. ಉದ್ದ ಮತ್ತು 26 ಕಿಮೀ. ಅಗಲವಾಗಿದೆ. ಇವೆರಡನ್ನೂ ಕೂಡಿಸುವ ಟೀಪಿಟಾಪ ನದಿ ಮನಾಗ್ವ ಸರೋವರದಿಂದ ಹೊರಟು ನಿಕರಾಗ್ವ ಸರೋವರವನ್ನು ಸೇರುತ್ತದೆ. ನಿಕರಾಗ್ವದ ಪಶ್ಚಿಮದ ಇಳುಕಲು ತೀರ ತುಂಬ ಕಿರಿದು.

    ನಿಕಾರಾಗ್ವದಲ್ಲಿ ಪೆಸಿಫಿಕ್ ಸಾಗರವನ್ನು ಸೇರುವ ಪ್ರಮುಖ ನದಿಗಳು ಯಾವುವೂ ಇಲ್ಲ. ಮಧ್ಯದ ಜಲವಿಭಾಜಕ ಪ್ರಸ್ಥಭೂಮಿಯಿಂದ ಪೂರ್ವದ ಕಡೆಗೆ ಹರಿಯುವ ನದಿಗಳು ಕೋಕೋ, ರೀಯೋ ಗ್ರ್ಯಾಂಡೇ, ಎಸ್ಕಂಡೀಡೋ ಅಥವಾ ಬ್ಲೂ ಫೀಲ್ಡ್ಸ್ ಮತ್ತು ಸಾನ್ ವಾನ್. ಎಸ್ಕೆಂಡೀಡೋ ನದಿ ಮಾತ್ರ ಯಾನಯೋಗ್ಯ.

    ವಾಯುಗುಣ : ಮಧ್ಯದ ಪ್ರಸ್ಥಭೂಮಿಯನ್ನು ಬಿಟ್ಟು ಉಳಿದೆಡೆ ವಾಯುಗುಣ ಉಷ್ಣ ಮತ್ತು ಆದ್ರ್ರ. ಪಶ್ಚಿಮಕ್ಕಿಂತ ಪೂರ್ವದ ಕಡೆ ತಂಪು ಮತ್ತು ಆದ್ರ್ರತೆ ಹೆಚ್ಚು. ಪೆಸಿಫಿಕ್ ಸಾಗರದ ಕಡೆಯಲ್ಲಿ ಮೇಯಿಂದ ನವೆಂಬರ್ ವರೆಗೆ ಮಳೆ ಬೀಳುತ್ತದೆ. ಡಿಸೆಂಬರಿನಿಂದ ಏಪ್ರಿಲ್‍ವರೆಗೆ ಒಣಹವೆ ಇರುತ್ತದೆ. ಇಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 27 ಡಿಗ್ರಿ; ವಾರ್ಷಿಕ ಸರಾಸರಿ ಮಳೆ 1,905 ಮಿಮೀ. ಕ್ಯಾರಿಬಿಯನ್ ಸಮುದ್ರದ ಕಡೆಯ ಪ್ರದೇಶದಲ್ಲಿ ವರ್ಷದಲ್ಲಿ ಸುಮಾರು 9 ತಿಂಗಳು ಮಳೆ ಬೀಳುತ್ತದೆ. ಇಲ್ಲಿ ನಿಶ್ಚಿತ ಬೇಸಗೆಯಿರುವುದಿಲ್ಲ. ಇಲ್ಲಿಯ ವಾರ್ಷಿಕ ಸರಾಸರಿ ಉಷ್ಣತೆ 26 ಡಿಗ್ರಿ. ಒಟ್ಟು ಮಳೆ ಸುಮಾರು 3,810 ಮಿಮೀ. ಉತ್ತರದ ಪರ್ವತಪ್ರದೇಶದಲ್ಲಿ ವಾಯುಗುಣ ಹೆಚ್ಚು ತಂಪು. ಅಲ್ಲಿಯ ಸರಾಸರಿ ಉಷ್ಣತೆ 18 ಡಿಗ್ರಿ.

    ಸಸ್ಯಪ್ರಾಣಿಜೀವನ : ದೇಶದ ಅರ್ಧಕ್ಕೂ ಹೆಚ್ಚು ಭಾಗವನ್ನು ಉಷ್ಣ ವಲಯದ ಕಾಡು ಆವರಿಸಿದೆ. ಬಾದಾಮಿ, ಆಕ್ರೋಟು, ಅಗಲ ಎಲೆಯ ಗಂಡು ದೇವದಾರು, ರಾಜದಾರು, ಗುಗ್ಗುಲ, ತೈಲಪರ್ನಿ, ಮಹಾಗನಿ ಮುಂತಾದ ಮರಗಳಿವೆ. ಕ್ವೆಬ್ರಾಚೊ ಗಟ್ಟಿಮರವನ್ನೊದಗಿಸುತ್ತದೆ. ಇತರ ಮರಗಳು ಕಾಡು ರಬ್ಬರ್, ಎಬನಿ, ಬೀಟೆ ಹಾಗೂ ರಾಳ. ಮೆಡ್ಲರ್ ಮರ ಕ್ರ್ಯಾಬ್ ಸೇಬಿನಂಥ ಹಣ್ಣುಗಳನ್ನೊದಗಿಸುತ್ತದೆ. ಪಶ್ಚಿಮದ ತಗ್ಗು ನೆಲದಲ್ಲಿ ಹುಲ್ಲುಗಾಡುಗಳಿವೆ.

    ಜಾಗ್ವಾರ್, ಪ್ಯೂಮ, ಕೋತಿ, ಆರ್ಮಡಿಲೊ, ಮೊಸಳೆ, ಗಿಣಿ, ಪೆಕರಿ, ಹಲವು ಬಗೆಯ ಹಾವುಗಳು, ಪಕ್ಷಿಗಳು ಇವೆ. ಇವಲ್ಲದೆ ಸಿಹಿನೀರಿನ ಹಾಗೂ ಉಪ್ಪುನೀರಿನ ಮೀನುಗಳು, ಮೃದ್ವಂಗಿ, ಹೆಗ್ಗಣ ಮತ್ತು ಕ್ರಿಮಿಕೀಟಗಳು ಹೇರಳವಾಗಿವೆ.

    ಜನ : ದೇಶದಲ್ಲಿ ಸೇಕಡ 70ರಷ್ಟು ಜನರು ಮೆಸ್ಟಿಜೋ (ಐರೋಪ್ಯ ಮತ್ತು ಇಂಡಿಯನ್ ಮಿಶ್ರತಳಿ). ಜಾಂಬೋ (ನೀಗ್ರೋ ಮತ್ತು ಇಂಡಿಯನ್ ಮಿಶ್ರತಳಿ) ಮತ್ತು ಮುಲಾಟೋ (ಐರೋಪ್ಯ ಮತ್ತು ನೀಗ್ರೋ ಮಿಶ್ರತಳಿ) ಪಂಗಡಗಳಿಗೆ ಸೇರಿದವರು. ಸೇಕಡ 20ರಷ್ಟು ಜನರು ಬಿಳಿಯರು, ಸೇಕಡ 10ರಷ್ಟು ಜನರು ನೀಗ್ರೋಗಳು. ಮೂಲ ಇಂಡಿಯನರಲ್ಲಿ ಸುಮೋ, ಮಿಸ್ಕಿಟೋ ಮತ್ತು ರಾಮಾಕ್ವಿ ಬುಡಕಟ್ಟುಗಳು ಮಾತ್ರ ಉಳಿದಿವೆ. 1970ರ ದಶಕದಲ್ಲಿ ಸೇಕಡ 52ರಷ್ಟು ಜನರು ನಗರವಾಸಿಗಳಾಗಿದ್ದರು. ಆಗ್ನೇಯ ತೀರದಲ್ಲಿರುವ ಮನಾಗ್ವ ಅತ್ಯಂತ ದೊಡ್ಡ ನಗರ. ಜನಸಂಖ್ಯೆ 4,58,589 (1971). 1972ರ ಡಿಸೆಂಬರ್ 23ರಂದು ಸಂಭವಿಸಿದ ಭೂಕಂಪ ಮತ್ತು ಅನಂತರದ ಬೆಂಕಿಯಿಂದ ನಗರಕ್ಕೆ ಬಹಳ ಹಾನಿ ತಟ್ಟಿತು. ಲೇಯಾನ್ (90,897) (1970). ಗ್ರನಾಡ (51,363), ಮಸಾಯ (30,800)- ಇವು ಇತರ ಪಟ್ಟಣಗಳಲ್ಲಿ ಮುಖ್ಯವಾದವು.

    ಭಾಷೆ: ನಿಕರಾಗ್ವದ ಅಧಿಕೃತ ಭಾಷೆ ಸ್ಪ್ಯಾನಿಷ್. ಕ್ಯಾರಿಬೀಯನ್ ತೀರದಲ್ಲಿ ಜಮೈಕದ ನೀಗ್ರೋಗಳು ಇಂಗ್ಲಿಷನ್ನಾಡುತ್ತಾರೆ. ಕೆಲವು ಇಂಡಿಯನರ ನುಡಿಗಳೂ ಉಳಿದುಕೊಂಡಿವೆ.

    ಧರ್ಮ: ರೋಮನ್ ಕ್ಯಾತೊಲಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ದೇಶದಲ್ಲಿ ಒಬ್ಬ ಆರ್ಚ್‍ಬಿಷಪ್ ಮತ್ತು ಐವರು ಬಿಷಪ್‍ಗಳು ಇದ್ದಾರೆ. ಪೂರ್ವ ತೀರದಲ್ಲಿ ಮೊರಾವಿಯನ್ನರು ಮತ್ತು ಆಂಗ್ಲಿಕನ್ನರು ಸೇರಿದಂತೆ ಪ್ರಾಟೆಸ್ಟಂಟರು ಹೆಚ್ಚು.

    ಆರ್ಥಿಕತೆ : ನಿಕಾರಾಗ್ವದ ಆರ್ಥಿಕತೆ ಕೃಷಿ ಪ್ರಧಾನವಾದ್ದು. ದೇಶದಲ್ಲಿ ನಿಸರ್ಗ ಸಂಪತ್ತು ಸಮೃದ್ಧವಾಗಿರುವುದಾದರೂ ಹಣದ ಅಡಚಣೆಯಿಂದಾಗಿ ಅದರ ಲಾಭವನ್ನು ಸಾಕಷ್ಟು ಪಡೆಯುವುದು ಸಾಧ್ಯವಾಗುತ್ತಿಲ್ಲ. ಕೈಗಾರಿಕೆ ಇನ್ನೂ ಆರಂಭದಿಶೆಯಲ್ಲಿದೆ.

    ಖನಿಜಗಳು : ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣದ ಅದುರು, ಸೀಸ, ಬಾಕ್ಸೈಟ್, ಅಮೃತಶಿಲೆ ಮತ್ತು ಜಿಪ್ಸಮ್ ನಿಕ್ಷೇಪಗಳಿವೆಯೆಂದು ಅಂದಾಜು ಮಾಡಲಾಗಿದೆ. ಚಿನ್ನದ ಗಣಿಗಾರಿಕೆ ವಸಾಹತಿನ ಕಾಲದಿಂದಲೂ ಮಹತ್ತ್ವದ್ದಾಗಿದೆ. ಅದರ ಉತ್ಪಾದನೆ 1938ರಲ್ಲಿ 44,500 ಫೈನ್ ಔನ್ಸ್ ಇದ್ದದ್ದು 1960ರ ದಶಕದಲ್ಲಿ ವಾರ್ಷಿಕ ಸರಾಸರಿ 2,10,000 ಫೈನ್ ಔನ್ಸ್‍ಗಳಿಗೆ ಏರಿತ್ತು. 1968ರಲ್ಲಿ 11,517 ಮೆಟ್ರಿಕ್ ಟನ್ ತಾಮ್ರ, 1,93,000 ಟ್ರಾಯ್ ಔನ್ಸ್ ಚಿನ್ನ, 4,15,847 ಟ್ರಾಯ್ ಔನ್ಸ್ ಬೆಳ್ಳಿ, 19,500 ಮೆಟ್ರಿಕ್ ಟನ್ ಜಲಸಂಯುಕ್ತ ಸುಣ್ಣ ಮತ್ತು 14,000 ಮೆಟ್ರಿಕ್ ಟನ್ ಜಿಪ್ಸಮ್ ಉತ್ಪಾದನೆಯಾದುವು.

    ಕೃಷಿ : ಸೇಕಡ 20ರಷ್ಟು ಭೂಮಿಯನ್ನು ಮಾತ್ರ ಕೃಷಿಗೆ ಬಳಸಲಾಗುತ್ತಿದೆ. ಪೂರ್ವತೀರದ ಬಯಲಿನಲ್ಲಿ ಬಾಳೆ, ಹತ್ತಿ, ಹಣ್ಣು ಬೆಳೆಯುತ್ತಾರೆ. ಕಾಫಿ, ಸಕ್ಕರೆ, ಕಾಳು, ಅವರೆ, ಕೋಕೋ, ಬತ್ತ, ಎಳ್ಳು, ತಂಬಾಕು ಮತ್ತು ಗೋದಿ ಪಶ್ಚಿಮಾರ್ಧದಲ್ಲಿ ಬೆಳೆಯುತ್ತವೆ. ಹತ್ತಿ, ಕಾಫಿ, ಮಾಂಸ ಮತ್ತು ಸಕ್ಕರೆ ಪ್ರಮುಖ ರಫ್ತುಗಳು. ಸೋಯಾ ಅವರೆ ಮತ್ತು ನೆಲಗಡಲೆಗಳ ಬೆಳೆಗಳನ್ನು ಪ್ರಾರಂಭಿಸಲಾಗಿದೆ.

   ಸಾರಿಗೆ ಸೌಲಭ್ಯಗಳ ಅಭಾವದಿಂದಾಗಿ ಅರಣ್ಯಗಾರಿಕೆ ಹೆಚ್ಚು ಬೆಳೆದಿಲ್ಲ. ಸೀಗಡಿಗಳನ್ನು ಹಿಡಿಯುವುದು ಒಂದು ಮುಖ್ಯ ಕಡಲು ಚಟುವಟಿಕೆ. ಪೆಸಿಫಿಕ್ ಸಾಗರ ಮತ್ತು ಕ್ಯಾರಿಬೀಯಾನ್‍ಗಳಲ್ಲಿ ಹಿಡಿಯಲಾಗುವ ಸೀಗಡಿಗಳಲ್ಲಿ ಸೇಕಡ 95ರಷ್ಟು ರಫ್ತಾಗುತ್ತದೆ.

 ಕೈಗಾರಿಕೆ : ಪೆಟ್ರೋಲ್, ಬೆಂಕಿಪಟ್ಟಿಗೆ, ಪಾದರಕ್ಷೆ, ಸಾಬೂನು, ಸಸ್ಯತೈಲ, ಮದ್ಯ ಮತ್ತು ಬಟ್ಟೆ ತಯಾರಾಗುತ್ತದೆ. ತೈಲಶುದ್ಧೀಕರಣ ಉದ್ಯಮ ಬೆಳೆಯುತ್ತಿದೆ.

    ಸಾರಿಗೆ : ಸಾರಿಗೆ ವ್ಯವಸ್ಥೆ ಪಶ್ಚಿಮವಲಯದಲ್ಲಿ ಬೆಳೆದಿದೆ. ದೇಶದಲ್ಲಿ ಸುಮಾರು 13,084 ಕಿಮೀ. ಹೆದ್ದಾರಿಗಳಿವೆ. ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಭಾಗದವು. ಮಳೆಗಾಲದಲ್ಲಿ ಸಂಚಾರಕ್ಕೆ ಅಯೋಗ್ಯವಾಗುತ್ತವೆ. 36 ಕಿಮೀ. ರೈಲು ಮಾರ್ಗಗಳಿವೆ. ಮುಖ್ಯಮಾರ್ಗ ಗ್ರನಾಡದಿಂದ ಕರಿಂಟೋಗೆ ಹೋಗುತ್ತದೆ. ಪ್ವೆರ್ಟೊ ಮೊರಜಾಮ್, ಕರಿಂಟೋ, ಸ್ಯಾನ್, ವಾನ್ ಡೆಲ್ ಸುರ್ ಇವು ಪೆಸಿಫಿಕ್ ಬಂದರುಗಳು. ಪ್ವೆರ್ಟೊ ಕಬೇಜಾಸ್, ಬ್ಲ್ಯೂಫೀಲ್ಡ್ ಇವು ಕ್ಯಾರಿಬೀಯನ್ ತೀರದ ಬಂದರುಗಳು. ಮನಾಗ್ವದ ಬಳಿ ಅಂತರಾಷ್ಟ್ರೀಯ ವಿಮಾನನಿಲ್ದಾಣವಿದೆ. ಅಲ್ಲಿಂದ ಉತ್ತರ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳಿಗೆ ನಿತ್ಯವೂ ಜೆಟ್ ವಿಮಾನ ಸಂಚಾರವುಂಟು. ಪ್ವೆರ್ಟೊ ಕಬೇಜಾಸ್‍ನಲ್ಲಿರುವುದು ಎರಡನೆಯ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ. ಇವಲ್ಲದೆ ಐದು ಅಂತರಿಕ ವಿಮಾನ ನಿಲ್ದಾಣಗಳಿವೆ.

    ಶಿಕ್ಷಣ : 6-13 ವರ್ಷಗಳ ಮಕ್ಕಳಿಗೆ ಕಡ್ಡಾಯವಾದ ಶುಲ್ಕರಹಿತ ಶಿಕ್ಷಣ ನೀಡಲಾಗುತ್ತದೆ. 1961ರಲ್ಲಿ ಮನಾಗ್ವದಲ್ಲಿ ತೆರೆಯಲಾದ ಮಧ್ಯ ಅಮೆರಿಕನ್ ವಿಶ್ವವಿದ್ಯಾಲಯದ ನಿಕರಾಗ್ವ ಶಾಖೆ ಹಾಗೂ 1814ರಲ್ಲಿ ಲೇಯಾನ್‍ನಲ್ಲಿ ಸ್ಥಾಪಿತವಾದ ನಿಕರಾಗ್ವ ವಿಶ್ವವಿದ್ಯಾಲಯ ಇವು ಉಚ್ಚ ಶಿಕ್ಷಣ ನೀಡುತ್ತವೆ. ಮಧ್ಯ ಅಮೆರಿಕ ವ್ಯವಹಾರ ಆಡಳಿತ ಸಂಸ್ಥೆ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುತ್ತದೆ.

    ಆಡಳಿತ :  1838-1972ರಲ್ಲಿ ನಿಕರಾಗ್ವದಲ್ಲಿ 9 ಸಂವಿಧಾನಗಳು ಬಂದಿವೆ. 1972ರವರೆಗೆ ಜಾರಿಯಲ್ಲಿದ್ದ 1950ರ ಸಂವಿಧಾನದ ಪ್ರಕಾರ 5 ವರ್ಷಗಳ ಅವಧಿಗೆ ಚುನಾಯಿತನಾಗುವ ಅಧ್ಯಕ್ಷನೇ ದೇಶದ ಮುಖ್ಯನಾಗಿದ್ದ. ಅವನಿಗೆ ವಿಶೇಷ ಅಧಿಕಾರಗಳಿದ್ದವು. 1960ರಲ್ಲಿ ಪರಿಷ್ಕøತವಾದ ಸಂವಿಧಾನದಲ್ಲಿ 45 ಚುನಾಯಿತ ಡೆಪ್ಯುಟಿಗಳ ಚೇಂಬರ್ ಮತ್ತು 18 ಸದಸ್ಯರ ಸೆನೆಟ್ ಎಂಬ ದ್ವಿಸದನ ವಿಧಾನ ಮಂಡಲ ಜಾರಿಗೆ ಬಂತು. 1967ರಲ್ಲಿ ಜನರಲ್ ಅನಾಸ್ಟಾಸಿಯೋ ಸೋಮ್‍ಜಾಡಬಾಯ್ಲೆ ಅಧ್ಯಕ್ಷರಾಗಿ ಚುನಾಯಿತರಾದರು. ಅವರು 1972ರಲ್ಲಿ ರಾಜಿನಾಮೆ ನೀಡಿದ ಮೇಲೆ ಮೂವರು ಸದಸ್ಯರ  ರಾಷ್ಟ್ರೀಯ ಆಡಳಿತ ಸಭೆ ಅಧಿಕಾರಕ್ಕೆ ಬಂತು. 100 ಸದಸ್ಯರ ಸಂವಿಧಾನ ರಚನಾ ಸಭೆ ರೂಪಿತವಾಯಿತು. ಅದು ಹೊಸ ಸಂವಿಧಾನ ರಚಿಸುವ ಹೊಣೆ ಹೊತ್ತಿತು. 1974ರ ಸೆಪ್ಟೆಂಬರ್ 1ರಂದು ಅನಾಸ್ಟಾಸಿಯೋ ಮತ್ತೆ ಅಧ್ಯಕ್ಷರಾಗಿ ಆಯ್ಕೆ ಹೊಂದಿದರು.

   ಇತಿಹಾಸ: ನಿಕರಾಗ್ವವನ್ನು 1502ರಲ್ಲಿ ಕೊಲಂಬಸ್ ಕಂಡ. 1821ರ ಸೆಪ್ಟೆಂಬರ್ 15ರಂದು ಸ್ವಾತಂತ್ರ್ಯ ಗಳಿಸುವವರೆಗೂ ಅದು ಸ್ಪೇನಿನ ವಸಾಹತುವಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಸ್ವಲ್ಪ ಕಾಲ ಅದು ಮಧ್ಯ ಅಮೆರಿಕ ಒಕ್ಕೂಟವನ್ನು ಸೇರಿತ್ತು. 1838ರ ಏಪ್ರಿಲ್ 30ರಂದು ಬೇರೆಯಾಗಿ ಸ್ವತಂತ್ರ ಪ್ರಜಾಪ್ರಭುತ್ವವಾಯಿತು. ನಿಕರಾಗ್ವ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಿದೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ